ಗುರುವಾರ, ಜುಲೈ 25, 2013

ಮಣಿಪಾಲ್ ರೇಪ್: ಕೇರಳ ಸರಕಾರದಿಂದ 3 ಲಕ್ಷ ಪರಿಹಾರ

ಉಡುಪಿ:  ಕಳೆದ ತಿಂಗಳು ಮೂವರು ಕಾಮುಕರಿಂದ ನಲುಗಿದ ಮಣಿಪಾಲ ವಿಶ್ವವಿದ್ಯಾಲಯದ 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಗೆ ಕೇರಳ ಸರಕಾರ 3 ಲಕ್ಷ ರೂ ಪರಿಹಾರ ಘೋಷಿಸಿದೆ. ಬಾಧಿತ ಯುವತಿ ಮೂಲತಃ ಕೇರಳದ ತಿರುವನಂತಪುರ ನಿವಾಸಿ. ಜೂನ್ 20ರ ರಾತ್ರಿ ಆಕೆಯನ್ನು ಅಪಹರಿಸಿದ ಮೂವರು ದುಷ್ಕರ್ಮಿಗಳು ನಿರ್ಜನ ಪ್ರದೇಶದಲ್ಲಿ ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿ, ಕೆಎಂಸಿ ಕಾಲೇಜು ಬಳಿ ಆಕೆಯನ್ನು ಬಿಸಾಡಿ ಹೋಗಿದ್ದರು.

ಆ ನಂತರ ಇದೇ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆದ ಬಾಧಿತ ವಿದ್ಯಾರ್ಥಿನಿ, ಮೂರು ವಾರಗಳ ಬಳಿಕ ಡಿಸ್ ಚಾರ್ಜ್ ಆಗಿ, ತವರು ರಾಜ್ಯಕ್ಕೆ ವಾಪಸಾಗಿದ್ದರು. ಕೇಂದ್ರ ಸರಕಾರದ ನಿರ್ಭಯಾ ನಿಧಿಯಡಿ ಬಾಧಿತ ವಿದ್ಯಾರ್ಥಿನಿಗೆ 3 ಲಕ್ಷ ರೂ ಪರಿಹಾರ ನೀಡುವುದಾಗಿ ಕೇರಳ ಸರಕಾರ ಮಂಗಳವಾರ ಘೋಷಿಸಿದೆ. ತನ್ನ ಮೇಲೆ ನಡೆದ ಪೈಶಾಚಿಕ ಕ್ರೂರತೆಯನ್ನು ಆಕೆ ಧೈರ್ಯವಾಗಿ ಮೆಟ್ಟಿ ನಿಂತಿದ್ದಾಳೆ. ದುರಂತವನ್ನು ಎದುರಿಸುವಲ್ಲಿ ಆಕೆ ನಿಜಕ್ಕೂ ಧೈರ್ಯ ಪ್ರದರ್ಶಿಸಿದ್ದಾಳೆ ಎಂದು ಕೇರಳ ಸರಕಾರ ಹೇಳಿದೆ.

ಕೇರಳದಲ್ಲಿ ನಿರ್ಭಯಾ ನಿಧಿ ಯೋಜನೆಯ ಸಲಹೆಗಾರ್ತಿಯಾಗಿರುವ ಸುನೀತಾ ಕೃಷ್ಣನ್ ಅವರು ಮಣಿಪಾಲ್ ರೇಪ್ ಬಾಧಿತ ವಿದ್ಯಾರ್ಥಿನಿಗೆ ಪರಿಹಾರ ಘೋಷಿಸುವಂತೆ ಕೇರಳ ಸರಕಾರಕ್ಕೆ ಸೂಚಿಸಿದ್ದರು. ಸುನೀತಾ ಅವರ ಸಲಹೆಯ ಮೇರೆಗೆ ರಾಜ್ಯ ಸರಕಾರವು ಬಾಧಿತ ವಿದ್ಯಾರ್ಥಿನಿಯ ಧೈರ್ಯ ಮೆಚ್ಚಿ, ಆಕೆಗೆ ಪರಿಹಾರ ನೀಡಲು ಮುಂದಾಗಿದೆ. ಘಟನೆ ನಡೆದ ಒಂದೇ ವಾರದಲ್ಲಿ ಮಣಿಪಾಲ ಪೊಲೀಸರು ಜೂನ್ 27ರಂದು ಮೂವರೂ ಆರೋಪಿಗಳಾದ ಯೋಗೀಶ್, ಹರಿಪ್ರಸಾದ್ ಮತ್ತು ಆನಂದನನ್ನು ಬಂಧಿಸಿದ್ದರು. ತದನಂತರ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಆರೋಪದ ಮೇಲೆ ಆರೋಪಿಗಳ ಇಬ್ಬರು ಸಂಬಂಧಿಗಳನ್ನೂ ಪೊಲೀಸರು ಬಂಧಿಸಿದ್ದರು. ಪ್ರಸ್ತುತ 3 ಪ್ರಮುಖ ಆರೋಪಿಗಳು ಶಿವಮೊಗ್ಗ ಜೈಲಿನಲ್ಲಿ ಜುಲೈ 29ರವರೆಗೂ ನ್ಯಾಯಾಂಗ ಬಂಧನಲ್ಲಿದ್ದರೆ ಯೋಗೀಶ ಮತ್ತು ಹರಪ್ರಸಾದನ ಸೋದರರಿಬ್ಬರೂ ಹಿರಿಯಡ್ಕ ಜೈಲಿನಲ್ಲಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ