ಶುಕ್ರವಾರ, ಜುಲೈ 19, 2013

ಚುಂಬನ ಒಂದು ಕಲೇ....

ಸಿನಿಮಾಗಳಿಗೂ ಅಧರ ಚುಂಬನಕ್ಕೂ ಮೊದಲಿನಿಂದಲೂ ನಂಟು. ನೂರು ವರ್ಷದ ಇತಿಹಾಸ ಇರುವ ಭಾರತೀಯ ಸಿನಿಮಾದಲ್ಲಿ ಈ ಚುಂಬನದ ದೃಶ್ಯಗಳನ್ನು ಮತ್ತೆ ಮತ್ತೆ ತೋರಿಸುವ ನಿರ್ದೇಶಕರಿಗೂ, ಅಭಿನಯಿಸುವ ಪಾತ್ರಧಾರಿಗಳಿಗೂ, ನೋಡುವ ವೀಕ್ಷಕರಿಗೂ ಸಾಕಷ್ಟು `ಕುಚ್ ಕುಚ್ ಹೋಗಯಾ' ಎನಿಸಿರಬೇಕು.
ವಿದೇಶಿ ಪ್ರೇಮಿಗಳು ಅಂಟಿಕೊಂಡು `ಲಿಪ್‌ಲಾಕ್'ಗೆ ಸಿದ್ಧರಾಗುವ ದೃಶ್ಯಗಳನ್ನು ಕಂಡ ಮನಸ್ಸುಗಳು ಕೆಲವೊಮ್ಮೆ ಗಲಿಬಿಲಿಗೊಂಡದ್ದಿದೆ. ಆದರೆ ಈ `ಲಿಪ್‌ಲಾಕ್' ಸನ್ನಿವೇಶಗಳು ಭಾರತೀಯ ಸಿನಿಮಾಗಳಲ್ಲಿ ಇತ್ತೀಚಿನವೇನಲ್ಲ.
ಭಾರತೀಯ ಸಿನಿಮಾದ ಮೊದಲ ಕನಸಿನ ಕನ್ಯೆ, ಮಾದಕ ಬೆಡಗಿ ದೇವಿಕಾ ರಾಣಿಯಿಂದ ಹಿಡಿದು ಇತ್ತೀಚಿನ ನಟಿಯರವರೆಗೆ ಅಧರ ಚುಂಬನಕ್ಕೆ ಒಡ್ಡಿಕೊಂಡವರ ಯಾದಿ ದೊಡ್ಡದಿದೆ. ನಟ ಹಿಮಾಂಶು ರೈಯಿಂದ ಹಿಡಿದು ಸೀರಿಯಲ್ ಕಿಸ್ಸರ್ ಎಂದು ಖ್ಯಾತಿ ಪಡೆದಿರುವ ಇಮ್ರಾನ್ ಹಶ್ಮಿವರೆಗೆ  ಚುಂಬನಶೂರರು ಬಂದು ಹೋಗಿದ್ದಾರೆ.
ಹಿರಿತೆರೆಯಲ್ಲಿ ಮಾತ್ರ ಪರದೆಯಗಲ ಕಾಣಿಸಿಕೊಳ್ಳುತ್ತಿದ್ದ ಈ ಚುಂಬನ ದೃಶ್ಯಗಳು ಈಗ ಕಿರುತೆರೆಗೂ ಲಗ್ಗೆಯಿಟ್ಟಿವೆ. ವೈದ್ಯರು `ಲಿಪ್‌ಲಾಕ್'ಗೆ  ಮೊದಲು ವಹಿಸಬೇಕಾದ ಎಚ್ಚರಿಕೆಗಳನ್ನು ಪಟ್ಟಿಮಾಡತೊಡಗಿದ್ದಾರೆ. ಇಲ್ಲಿವೆ ಅಂಥ ಕೆಲವು ಚುಂಬನದ ಟಿಪ್ಸ್...
`ತುಟಿಗೆ ತುಟಿ  ಸೇರಿಸುವುದು ಸುಲಭದ ಮಾತಲ್ಲ. ಇದೊಂದು ಕಲೆ. ಮುತ್ತಿನಿಂದ ಸಂಬಂಧಗಳು ಮತ್ತಷ್ಟು ಗಾಢವಾಗುತ್ತದೆ. ಮುತ್ತು ಕೊಡುವ ಮೊದಲು ಪ್ರೇಮಿಗಳು ಅಗತ್ಯವಾದ ನಿಯಮಗಳನ್ನು ಪಾಲಿಸಬೇಕು' ಹಿತವಚನ ಹೇಳುತ್ತಾರೆ ದಂತ ತಜ್ಞವೈದ್ಯೆ ಶಿಖಾಗಿರಿ.
ಚುಂಬನಕ್ಕೆ ಮುನ್ನ ಬಾಯಿ ಸ್ವಚ್ಛತೆಯ ಕುರಿತು ಗಮನ ಹರಿಸಬೇಕಂತೆ. ಮೊದಲನೆಯದಾಗಿ ಊಟ, ತಿಂಡಿಯಾದ ನಂತರ ಚೆನ್ನಾಗಿ ಹಲ್ಲು ಉಜ್ಜಬೇಕು. ಬೆಳಿಗ್ಗೆ ಬ್ರಶ್ ಮಾಡಿದ ನಂತರ ದವಡೆಯನ್ನು ಕೈಯಿಂದ ನಿಧಾನವಾಗಿ ಮಸಾಜ್ ಮಾಡಬೇಕು. ಇದರಿಂದ ಹಲ್ಲು ಸ್ವಚ್ಛವಾಗುತ್ತದೆ. ಕೀಟಾಣುಗಳಿಂದ ಮುಕ್ತಿ ಪಡೆಯುವುದರ ಜೊತೆಗೆ ಸಂಗಾತಿಗೆ ಅತಿ ಸಮೀಪ ಹೋದರೂ ಇರುಸು ಮುರುಸಾಗದು ಎಂದು ಸಲಹೆ ನೀಡುತ್ತಾರೆ ಶಿಖಾ.
ಬಾಯಿ ದುರ್ವಾಸನೆ ಇದ್ದರೆ ಎಂಥ ಅನಾಹುತವಾದೀತು ಎಂಬುದಕ್ಕೆ ಶಿಖಾ ಉದಾಹರಣೆಯೊಂದನ್ನು ನೀಡುತ್ತಾರೆ. ಅದು `ಡ್ಯೂಪ್ಲಿಸಿಟಿ' ಸಿನಿಮಾದ ಶೂಟಿಂಗ್ ಸಂದರ್ಭ. ಹಾಲಿವುಡ್ ನಟಿ ಜೂಲಿ ರಾಬರ್ಟ್ಸ್ ಪೀನಟ್ ಬಟರ್ ಸ್ಯಾಂಡ್‌ವಿಚ್ ತಿಂದಿದ್ದರಂತೆ. ಅವರ ಬಾಯಿಯಿಂದ ಬರುತ್ತಿದ್ದ ದುರ್ವಾಸನೆಯಿಂದಾಗಿ ನಟ ಕ್ಲೈವ್ ಓವನ್ ಅವರಿಗೆ ಅಧರ ಚುಂಬಿಸಲು ಸಾಧ್ಯವಾಗಲೇ ಇಲ್ಲವಂತೆ. ಅದಾದ ನಂತರ ಜೂಲಿ ಬಾಯಿ ಸ್ವಚ್ಛತೆ ಬಗ್ಗೆ ಹೆಚ್ಚು ಕಾಳಜಿ ವಹಿಸಿದರಂತೆ.
`ತಮ್ಮ ಬಾಯಿ ವಾಸನೆ ಬಗ್ಗೆ ಅರಿವಿದ್ದವರೂ ಮೌತ್‌ವಾಷ್ ಉಪಯೋಗಿಸಬೇಕು. ಇದರಿಂದ ಬಾಯಿ ಸ್ವಚ್ಛವಾಗುವುದರ ಜತೆಗೆ ದುರ್ಗಂಧವೂ ಕಡಿಮೆಯಾಗುತ್ತದೆ' ಎಂದು ಹೇಳುತ್ತಾರೆ ದಂತವೈದ್ಯೆ ರಚನಾ ದೋಶಿ.
ಫ್ರೆಂಚ್ ಕಿಸ್ ಆಗಲಿ, ವುಡ್‌ಪೆಕ್ಕರ್ ಕಿಸ್  ಆಗಲಿ ನಿಮ್ಮ ತುಟಿ ಒಣಗದಂತೆ ನೋಡಿಕೊಳ್ಳಿ. ಲಿಪ್‌ಬಾಮ್ ಉಪಯೋಗಿಸಿ ಅದನ್ನು ಆದಷ್ಟೂ ತೇವವಾಗಿಟ್ಟುಕೊಂಡರೆ ಚುಂಬನವು ಹಿತಾನುಭವ ನೀಡುತ್ತದಂತೆ.
ಬಾಯಿ ಸ್ವಚ್ಛತೆಯ ಜತೆಗೆ ಚುಂಬನಕ್ಕೆ ಸಿದ್ಧವಾಗುವುದು ಕೂಡ ಒಂದು ಕಲೆ. ತಮ್ಮ ಭಗ್ನ ಚುಂಬನದ ಅನುಭವವನ್ನು ವಿದ್ಯಾರ್ಥಿ ಹರ್ಷಾ ಹೇಳಿಕೊಂಡಿದ್ದು ಹೀಗೆ.... `ನಾನು ಮತ್ತು ನನ್ನ ಹುಡುಗಿ ಆಗಷ್ಟೇ ಡೇಟಿಂಗ್ ಶುರುಮಾಡಿದ್ದು. ನಮ್ಮ ಪ್ರೀತಿಯ ಕ್ಷಣಗಳನ್ನು ಆಸ್ವಾದಿಸಲು ಮನಾಲಿಗೆ ಹೋಗಿದ್ದೆವು.
ಜೋರಾಗಿ ಮಳೆ ಶುರುವಾಯಿತು. ಮಳೆಯಿಂದ ಮನಸ್ಸಿನ್ಲ್ಲಲಿ ಕಚಗುಳಿ ಶುರುವಾಯಿತು. ಮೈ ಬೇರೆ ಒದ್ದೆಯಾಗಿತ್ತು. ಹತ್ತಿರದಲ್ಲೇ ನನ್ನ ಹುಡುಗಿ ಇದ್ದಳು. ಪ್ರೀತಿಯಿಂದ ಅವಳನ್ನು ಆಲಿಂಗಿಸಿ ಮುತ್ತು ನೀಡಲು ಸಜ್ಜಾದೆ. ಆದರೆ ಅವಳು ಆ ಕ್ಷಣದಲ್ಲಿ ಚುಂಬನಕ್ಕೆ ಸಿದ್ಧಳಾಗಲೇ ಇಲ್ಲ' ಎಂದು ಬೇಸರ ವ್ಯಕ್ತಪಡಿಸುತ್ತಾರೆ ಹರ್ಷಾ ಮಹಾಜನ್.
`ಚುಂಬಿಸುವಾಗ ನಿಮ್ಮ ಸಂಗಾತಿಯ ತುಟಿಯನ್ನು ಕಚ್ಚಬೇಡಿ. ಇದರಿಂದ ಚುಂಬನ ಭಗ್ನವಾಗಬಹುದು. ನಿಧಾನವಾಗಿ ಗಟ್ಟಿಯಾಗಿ ಚುಂಬಿಸಿ. ಚುಂಬಿಸುವಾಗ ನಿಮ್ಮ ಕಣ್ಣು ಮುಚ್ಚಿರಲಿ. ಒಬ್ಬರ ಮೂಗು ಇನ್ನೊಬ್ಬರ ಮೂಗನ್ನು ಸ್ಪರ್ಶಿಸಿರಲಿ' ಎಂದು ಸಲಹೆ ನೀಡುತ್ತಾರೆ ರೊಮ್ಯಾಂಟಿಕ್ ಕಾದಂಬರಿಕಾರ ಫಾರಾಜ್ ಕಾಜಿ. `ಚುಂಬನಕ್ಕೆ ಜಾಗದ ಹಂಗಿಲ್ಲ. ಕಣ್ಮುಚ್ಚಿ ಚುಂಬನದ ಸಿಹಿ ಸವಿಯಿರಿ' ಎಂಬುದು ಕಾಜಿ ಕಿವಿಮಾತು. ಅದು ನಮ್ಮ ದೇಶದಲ್ಲಿ ಅಷ್ಟು ಸುಲಭವಲ್ಲ. ಚುಂಬನಕ್ಕಿಲ್ಲಿ ಜಾಗದ ಹಂಗು ಇದೆ. ಅಲ್ಲವೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ