ಶನಿವಾರ, ಜುಲೈ 27, 2013

ಗಿನ್ನಿಸ್ ಮರುಪ್ರಯತ್ನದಲ್ಲಿ ಕಡಲ ಮೀನು ಗೋಪಾಲ ಖಾರ್ವಿ ಡಿಸೆಂಬರ್‌ನಲ್ಲಿ ಮತ್ತೆ ಸಮುದ್ರಕ್ಕೆ

ಉಡುಪಿ:ಕೈ ಕಾಲುಗಳಿಗೆ ಬೇಡಿ ಹಾಕಿ ಸಮುದ್ರದ ಅಲೆಗಳ ಅಬ್ಬರದ ನಡುವೆ ಈಜಿ ಲಿಮ್ಕಾ ದಾಖಲೆಯ ಪುಟ ಸೇರಿದ್ದ ಕೋಡಿಕನ್ಯಾಣದ ಕಡಲ ಮೀನು ಗೋಪಾಲ ಖಾರ್ವಿ ಮತ್ತೆ ಗಿನ್ನಿಸ್ ದಾಖಲೆಯ ಪ್ರಯತ್ನಕ್ಕೆ ಕೈ ಹಾಕಲಿದ್ದಾರೆ. ಎರಡು ವರ್ಷಗಳ ಹಿಂದೆ ಗಿನ್ನಿಸ್ ದಾಖಲೆಗಾಗಿ ಸೈಂಟ್ ಮೇರಿಸ್ ದ್ವೀಪದಿಂದ ಮಲ್ಪೆ ಬೀಚ್‌ಗೆ ಈಜಿ ಸಾಧನೆ ಮೆರೆದು ಎಲ್ಲಾ ದಾಖಲೆಗಳನ್ನು ಲಂಡನ್‌ಗೆ ಕಳುಹಿಸಿದ್ದರು. ಆದರೆ ಈ ದಾಖಲೆಗಳನ್ನು ತಾಂತ್ರಿಕ ಕಾರಣಗಳಿಗಾಗಿ ಗಿನ್ನಿಸ್ ರೆಕಾರ್ಡ್  ಸಂಸ್ಥೆ ರಿಜೆಕ್ಟ್ ಮಾಡಿತ್ತು.  ಛಲ ಬಿಡದ ತ್ರಿವಿಕ್ರಮನಂತೆ ಮತ್ತೊಮ್ಮೆ ಗಿನ್ನಿಸ್ ದಾಖಲೆಗಾಗಿ ಖಾರ್ವಿ ತಾಂತ್ರಿಕ ದಾಖಲೆ ಸಹಿತ  ಮರು ಪ್ರಯತ್ನ ನಡೆಸಲಿದ್ದಾರೆ.
016
ಕಡಲ ಈಜಿನಲ್ಲಿ ಹಲವಾರು ಬಾರಿ ಸಾಹಸ ಮಾಡಿದ ಬಡ ಮೀನುಗಾರ ಗೋಪಾಲಖಾರ್ವಿಗೆ  ಈಜುವುದೇ ಒಂದು ಹವ್ಯಾಸ. ಹಲವಾರು ಬಾರಿ ನಿರಂತರವಾಗಿ ಕಡಲಿನಲ್ಲಿ ಈಜಿ ವಿಶೇಷ ಸಾಧನೆ ಮಾಡಿದ್ದ ಗೋಪಾಲ ಖಾರ್ವಿ ಲಿಮ್ಕಾ ದಾಖಲೆಯ ಪುಟಕ್ಕೆ ಸೇರ್ಪಡೆಗೊಂಡಿದ್ದರು. ಲಿಮ್ಕಾವೊಂದರಲ್ಲೇ ವಿರಮಿಸದ ಖಾರ್ವಿ ೨೦೧೨ ರ ಜನವರಿಯಲ್ಲಿ  ಗಿನ್ನಿಸ್ ದಾಖಲೆ ಬರೆಯುವ ನಿಟ್ಟಿನಲ್ಲಿ ಕೈ ಕಾಲಿಗೆ ಕಬ್ಬಿಣದ ಸಂಕೋಲೆಯಿಂದ ಬಿಗಿದು ಸೈಂಟ್‌ಮೇರಿಸ್ ದ್ವೀಪದಿಂದ ಮಲ್ಪೆ ಬೀಚ್ ತನಕ ಈಜಿ ಸಾಧನೆಗೈದಿದ್ದರು. ತನ್ನ ದಾಖಲೆಯನ್ನು ಗಿನ್ನಿಸ್ ದಾಖಲೆಗೆ ಸೇರಿಸಲು ಎಲ್ಲಾ ದಾಖಲೆಗಳನ್ನು ಲಂಡನ್‌ಗೆ ರವಾನಿಸಿದ್ದರು. ಸಮುದ್ರದ ರಕ್ಕಸ ಗಾತ್ರದ ಅಲೆಗಳಿಗೆ ಸೆಡ್ಡು ಹೊಡೆದು ೯ ಕಿಲೋ ಮೀಟರ್ ದೂರವನ್ನು ೨ ಗಂಟೆ ೪೫ ನಿಮಿಷದಲ್ಲಿ ಈಜಿ ದಡ ಸೇರಿದ್ದರು. ಸರಕಾರಿ ಅಧಿಕಾರಿಗಳ ಸಾಕ್ಷಿಯೊಂದಿಗೆ ಹೈಡೆಫಿನೇಶನ್ ಕ್ಯಾಮರಾದಲ್ಲಿ ಇವರ ಈಜಿನ ಸಾಧನೆ ರೆಕಾರ್ಡ್ ಆಗಿತ್ತು. ಈಜಿನ ಸಂದರ್ಭ ಜಿಪಿ‌ಎಸ್ ಅಳವಡಿಸದ ಕಾರಣ ತಾಂತ್ರಿಕ ಕಾರಣದಿಂದಾಗಿ ಗಿನ್ನಿಸ್ ಸಂಸ್ಥೆ ಇವರ ಸಾಹಸ ಯಾತ್ರೆಯನ್ನು ರಿಜೆಕ್ಟ್ ಮಾಡಿತ್ತು. ಗಿನ್ನಿಸ್ ಸಂಸ್ಥೆಯ ಆದೇಶ ಮೇರೆಗೆ ಗೋಪಾಲ ಖಾರ್ವಯವರು ಡಿಸೆಂಬರ್ ತಿಂಗಳಲ್ಲಿ ಮತ್ತೆ ಸಮುದ್ರದ ಅಲೆಗಳ ನಡುವೆ ಗುದ್ದಾಡಲಿದ್ದಾರೆ.
011
ಸಮುದ್ರದಲ್ಲಿ ಕೈ ಕಾಲು ಕಟ್ಟಿ ಈಜುವುದೆಂದರೆ ಸುಲಭದ ಮಾತಲ್ಲ. ಗಿನ್ನಿಸ್ ದಾಖಲೆಯ ಮರುಪ್ರಯತ್ನಕ್ಕೆ ಖಾರ್ವಿಯವರಿಗೆ ೧೦ ಲಕ್ಷಕ್ಕೂ ಹೆಚ್ಚು ವೆಚ್ಚವಾಗಲಿದೆ. ಮೀನುಗಾರಿಕೆ ವೃತ್ತಿಯನ್ನು ನಡೆಸುತ್ತಿರುವ ಈವರಿಗೆ ಇದನ್ನು ಭರಿಸುವ ಶಕ್ತಿಯಿಲ್ಲ. ಇವರ ಸಾಹಸದ ಯಾತ್ರೆಗೆ ಕೋಡಿಕನ್ಯಾಣದ ಜನತೆ ಸಾಥ್ ನೀಡಿದೆ. ಇವರ ಉತ್ಸಾಹ ಕಂಡು ವಿವಿಧ ಸಂಘ ಸಂಸ್ಥೆಗಳು ಕೂಡಾ ಸಹಾಯ ಹಸ್ತ ಚಾಚಿದೆ. ಆದರೆ ಇಷ್ಟೊಂದು ಹಣ ಭರಿಸುವುದು ಸುಲಭದ ಕೆಲಸವಲ್ಲ. ಕೋಡಿಕನ್ಯಾಣದ ಗೆಳೆಯರು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಕ್ರಿಯಾ ಸಮಿತಿಯನ್ನು ರಚಿಸಿ ಖಾರ್ವಿಗೆ ನೆರವಾಗುವ ಭರವಸೆ ನೀಡಿದ್ದಾರೆ.
015
ಗಿನ್ನಿಸ್ ಸಂಸ್ಥೆಯ ಪ್ರತಿನಿಧಿಗಳನ್ನು ಕರೆಸಿ ಅವರ ಸಮ್ಮುಖದಲ್ಲಿ ಗೋಪಾಲ್ ದಾಖಲೆ ಬರೆಯಲಿದ್ದಾರೆ. ಡಿಸೆಂಬರ್‌ನಲ್ಲಿ ನಡೆಯುವ ಗೋಪಾಲ ಖಾರ್ವಿಯವರ ಈ ಸಾಹಸ ಯಾತ್ರೆಗೆ ಸಂಘ ಸಂಸ್ಥೆಗಳು  ದಾನಿಗಳು ಇನ್ನಷ್ಟು ಸಹಕಾರ ನೀಡಬೇಕಾಗಿದೆ.
014
012

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ