ಮಂಗಳವಾರ, ಜುಲೈ 23, 2013

ಆಟಿ ಅಂದ್ರೆ ಸಂಭ್ರಮ ಅಲ್ಲ ಸ್ವಾಮೀ...ಅದು ಬವಣೆಯ ಬದುಕು?!

ಭಾಗ-೨
ಲೇಖಕರು-ಬನ್ನಂಜೆ ಬಾಬು ಅಮೀನ್ bannanje babu amin


ತುಳುವರ ಬದುಕು
ಜನಿವಾರೇತರ ತುಳುವರಲ್ಲಿ ಹೆಚ್ಚಿನವರು ಮಾತೃಮೂಲೀನ ಕುಟುಂಬ ಪದ್ಧತಿಯನ್ನು ಅನುಸರಿಸುತ್ತಿದ್ದರು. ತುಳುನಾಡಿಗೆ ಬೇರೆ ಬೇರೆ ಕಾಲಗಳಲ್ಲಿ ವಿವಿಧ ಉದ್ದೇಶಗಳಿಂದ ಬ್ರಾಹ್ಮಣರು, ಮೊಘಲರು, ಜೈನರು, ಕ್ರೈಸ್ತರು, ಸಾರಸ್ವತರು, ಮರಾಠಿಗರು, ಬೌದ್ಧರು ಹೀಗೆ ಅನೇಕ ಮತಧರ್ಮಗಳ ಜನ ವಲಸೆ ಬಂದರು. ಇಲ್ಲಿನ ಪರಿಸರ, ಜನರ ಹೊಂದಾಣಿಕೆ, ಉದ್ಯೋಗ-ಉತ್ಪತ್ತಿ-ವ್ಯಾಪಾರ ಇವೆಲ್ಲವೂ ಹಿತಕರವಾಗಿದ್ದುದರಿಂದ ವಲಸೆ ಬಂದ ಜನ ಮುಂದೆ ತುಳುನಾಡಿನ ತಮ್ಮ ಜೀವನವನ್ನು ಖಾಯಂಗೊಳಿಸುದುದು ಐತಿಹಾಸಿಕ ಸತ್ಯ.
gggg
ತುಳುವರು ಕೂಡು ಕುಟುಂಬದಲ್ಲಿ ಒಂದು `ಕೊಡಿಯಡಿ'(ಮನೆ)ಯಲ್ಲಿ ೬೦-೦೭೦ ಜನ ಅನ್ಯೋನ್ಯವಾಗಿ ಭಾವನಾತ್ಮಕವಾಗಿ ಬದುಕುತ್ತಿದ್ದರು. ಗದ್ದೆಗಳಲ್ಲಿ ಬೆಳೆದ ಅಕ್ಕಿ- ಭತ್ತ, ಕಡಲಿನಲ್ಲಿ ದೊರಕುವ ಮೀನು, ಕಂಗು-ತೆಂಗು-ಬಾಳೆ ಉತ್ಪತ್ತಿ, ಇವು ದೊಡ್ಡ ಹಡಗಿನಂತಹಾ ಕೂಡು ಕುಟುಂಬದ ಆಹಾರದ ಅವಶ್ಯಕತೆಗಳನ್ನು ಪೂರೈಸುತ್ತಿದ್ದವು. ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಂದು ಊರಿನಲ್ಲಿ ಬೆರಳೆಣಿಕೆಯಲ್ಲಿರುವ ಬೀಡುಗಳವರು, ಗುತ್ತು ಮತ್ತು ಬರ್ಕೆ ಮನೆತನಗಳವರು ಹಣಕಾಸಿನಲ್ಲಿ ಅನುಕೂಲದಿಂದಿದ್ದು, ಸ್ವಲ್ಪ ಮಟ್ಟಿಗೆ ಸಂತಸದ ದಿನಗಳನ್ನು ಕಂಡವರು. ಉಳಿದಂತೆ ಸಾರಾಸಗಟಾಗಿ ಎಲ್ಲ ಜನ ಮಳೆಗಾಲದ ನಾಲ್ಕು ತಿಂಗಳ ಕಾಲ ಅನ್ನ ದಾರಿದ್ರ್ಯದಿಂದ ಬಳಲುತ್ತಿದ್ದುದಂತೂ ಸತ್ಯ ವಿಚಾರ.
ಆಟಿಯಲ್ಲಿ ಮಳೆ ನೆರೆಯ ಹೊರೆ
shh
ಆಟಿ ತಿಂಗಳಿಗೆ ಮೊದಲು ಬರುವ ತಿಂಗಳು `ಕಾರ್ತೆಲ್'(ಕಾರು ತಿಂಗಳು). ಈ ತಿಂಗಳಲ್ಲಿ ಕೂಡಾ ಮಳೆಯ ಅಬ್ಬರ ಸಾಕಷ್ಟಿರುವುದು. ತುಳುನಾಡಿನ ಮಣ್ಣಿನ ಮಕ್ಕಳಿಗೆ ದಿನವಿಡೀ ಕಾರ್ತಿಂಗಳಲ್ಲಿ ಭತ್ತದ ಗದ್ದೆಗಳಲ್ಲಿ ನಾಟಿ ಮಾಡುವ ಕೆಲಸಕಾರ್ಯಗಳಿಂದ ಬಿಡುವಿಲ್ಲದ ದುಡಿಮೆ. ಹಾಗಾಗಿ ಮಳೆ-ಚಳಿ-ಗಾಳಿಗಳು ಗಣನೆಗೆ ಬರಲಾರದು. ಆಟಿ ತಿಂಗಳು ಪ್ರವೇಶ ಮಾಡುವುದೇ ಪುನರ್ವಸು(ಮಲ್ಲಪುರ್ಸೆ) ಮಳೆಯ ನಕ್ಷತ್ರದಿಂದ. ಹಿಂದಿನ ಕಾಲದಲ್ಲಿ ಈ ಎರಡು ನಕ್ಷತ್ರಗಳ ಪೂರ್ತಿ ಒಂದು ತಿಂಗಳ ಮಳೆ ಎಣಿಸುವಾಗಲೇ ಮೈ ಜುಮ್ಮನ್ನಿಸುವುದು, ತನು ಕಂಪಿಸುವುದು. ಇಂದಿನ ದಿನಗಳಲ್ಲಿ ವಾತಾವರಣದ ಏರುಪೇರುಗಳಿಂದ ಅನಿರೀಕ್ಷಿತ ಮಳೆ ಬರುವುದಿದೆ. ಆದರೆ ಅಂದಿನ ಮಳೆಯ ಭೀಕರತೆ ಇಂದಿನಂತಲ್ಲ. ಒನಕೆಯಂತೆ ತೋರದ ಮಳೆಯ ಹನಿಗಳು. ಒಂದು ತಿಂಗಳು ಸೂರ್ಯನ ದರ್ಶನವೇ ಕನಸಿನ ಮಾತು.
karnataka
ಮಳೆಯ ಹೊಡೆತದಿಂದ ಮಣ್ಣು ಸಡಿಲಗೊಂಡು ತಗ್ಗು ಪ್ರದೇಶಗಳಲ್ಲಿ ಕಾರಂಜಿಯಂತೆ ನೀರು ಪುಟಿಯುತ್ತಿರುವುದು. `ಪುರ್ಸೆ ಬರ್ಸ ಪುಣ ಪಿದಯಿ ದೀವರೆಗ್ ಬುಡಂದ್'(ಪುನರ್ವಸು-ಪುಷ್ಯ ನಕ್ಷತ್ರದ ಮಳೆಯ ಬಿರುಸಿಗೆ ಸಾವು ಸಂಭವಿಸಿದರೆ ಹೆಣವನ್ನು ಸಂಸ್ಕಾರ ಮಾಡುವುದಕ್ಕೂ ತೊಂದರೆಯಾಗುವುದು) ಎಂಬ ತುಳುವರ ಮಾತಿನಿಂದ ಅಂದಿನ ಮಳೆಯ ಭೀಕರತೆಯನ್ನು ನಾವು ಅರ್ಥ ಮಾಡಿಕೊಳ್ಳಬಹುದು.
ಈ ಮಳೆಗೆ ಮನೆಮಂದಿ ಅನಿವಾರ್ಯವಲ್ಲದಿದ್ದರೆ ಮನೆಬಿಟ್ಟು ಹೊರಗೆ ತಲೆ ಹಾಕಲಾರರು. ಮನೆಯೆಂದರೆ ಆ ಕಾಲದಲ್ಲಿ ಮಳೆಗಾದಲ್ಲಿ ವಾಸಕ್ಕೆ ತಕ್ಕುದಾಗಿರುವುದಿಲ್ಲ. ಮುಳಿಹುಲ್ಲು, ಬೈಹುಲ್ಲು, ಛಾವಣಿಯ ಮನೆಗಳೇ ಅಧಿಕ ಸಂಖ್ಯೆಯಲ್ಲಿ ಇದ್ದುವು. ತುಳು ಪಾಡ್ದನಗಳಲ್ಲಿ (ತುಳುವರ ಮೌಖಿಕ ಸಾಹಿತ್ಯ) ಇದರ ಕುರಿತು ಬೇಕಷ್ಟು ಉಲ್ಲೇಖಗಳಿವೆ. `ತುಳುನಾಡ ಸಿರಿಯ ಅಜ್ಜಯ್ಯ ಸತ್ಯನಾಪುರದ ಬೆರ್ವ ಆಳ್ವರ ಅರಮನೆಗೆ ಸಾವಿರ ಖಂಡುಗ ಮುಳಿಹುಲ್ಲು, ಸಾವಿರ ಖಂಡುಗ ಬೈಹುಲ್ಲು ಹೊದಿಸುತ್ತಿದ್ದರು' ಎಂದಿದೆ. ಮಳೆ ವಿಪರೀತ ಸುರಿಯತೊಡಗಿದಾಗ ನೆಲ ಅತಿಯಾಗಿ ತೇವಗೊಂಡು ಪರಿಸರ ಅತ್ಯಂತ ಶೀತಲವಾಗುವುದು. ಹಾಗಾಗಿ ಕೆಲ ತಗ್ಗು ಪ್ರದೇಶಗಳಲ್ಲಿ ಸೆಗಣಿ ಸಾರಿಸಿರುವ ಮನೆಯ ನೆಲದ ಮೇಲೆ ಒಣಗಿದ ಸೋಗೆ, ಬೈಹುಲ್ಲು ಹರಡಿ ಅದರ ಮೇಲೆ ಚಾಪೆ ಹಾಸುವ ಸ್ಥಿತಿಯಿತ್ತು ಎನ್ನುವುದನ್ನು ಇಂದು ನೆನಪಿಸುವುದಿದ್ದರೆ ಅದು ಹರೆಯ ಸಂದವರು ಮಾತ್ರ. ಅಂತಹಾ ಸಂದಿಗ್ದದಲ್ಲಿ ಸಖತ್ ಕಾಯಿಲೆಯಿಂದ ಬಳಲುತ್ತಿದ್ದವರು, ಹಸಿ ಬಾಣಂತಿಮಯರು, ಹಸುಗೂಸುಗಳು ಬಹಳಾ ತೊಂದರೆಯನ್ನು ಅನುಭವಿಸಬೇಕಿತ್ತು.
ಇಂತಹಾ ವಿಷಮ ಶೀತ ಪರಿಸ್ಥಿತಿಯಲ್ಲಿ ವಿಷಮ ಶೀತ ಜ್ವರ(ಟೈಫಾಯ್ಡ್-ಮಂಡೆಮಾರಿ), `ಬಾಂತೆ ಪಿದಾವು' (ವಾಂತಿಬೇಧಿ-ಕಾಲರಾ), ನೀರ್‍ಕೊಟ್ಲೆ, ಮೈಲಿಗೆ ಮೊದಲಾದ ಸಾಂಕ್ರಾಮಿಕ ರೋಗಗಳು ಹಳ್ಳಿ ಪ್ರದೇಶಗಳಲ್ಲಿ ಬೀಡುಬಿಡುತ್ತಿದ್ದವು. ಆ ಮೂಲಕ ಜನಜೀವನವನ್ನು ಅಸ್ತವ್ಯಸ್ಥಗೊಳಿಸುತ್ತಿದ್ದವು. ಆಧುನಿಕ ವೈದ್ಯಕೀಯ ಸೌಲಭ್ಯಗಳಿಲ್ಲದ ಕಾಲವದು. ಹಳ್ಳಿಯ ಜನಪದ ವೈದ್ಯರ ಗ್ರಾಮೀಣ ಶುಷ್ರೂಷೆಗೆ ರೋಗ ತಲೆಬಾಗದೆ ಉಲ್ಬಣಗೊಳ್ಳುತ್ತಿತ್ತು. ಆಗ ಜನರು ಹೆದರಿ ಕಂಗಾಲಾಗುತ್ತಿದ್ದುದು ಸಹಜ.
ಎಡಬಿಡದೆ ಸುರಿಯುವ ಮಳೆ, ಎಲ್ಲೆಂದರಲ್ಲಿ ನೀರು ಉಕ್ಕಿ ಹರಿಯುವುದು, ನದಿ ತೀರದಲ್ಲಿ, ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರ ಬವಣೆಯನ್ನು ವಿವರಿಸಲು ಕಷ್ಟವಾಗುವುದು. ರಾತ್ರಿ ಹೊತ್ತಿನಲ್ಲಿ ಮುನ್ನೆಚ್ಚರಿಕೆ ಇಲ್ಲದೆ ನದಿಯಲ್ಲಿ ನೆರೆ ನೀರು ಉಕ್ಕಿ ಹರಿಯುವುದು. ಎಲ್ಲೆಂದರಲ್ಲಿ ನೆರೆಯ ಅಬ್ಬರ. ಸಂಪರ್ಕ ಮತ್ತು ಸಾಗಾಟದ ವ್ಯವಸ್ಥೆಯೇ ಇಲ್ಲ. ಹಸುಗೂಸು ಸಮೇತ ಬಾಣಂತಿಯರನ್ನು, ತುಂಬು ಗರ್ಭಿಣಿಯರನ್ನು, ವೃದ್ದರನ್ನು, ರೋಗಿಗಳನ್ನು ಆ ರಾತ್ರಿ ಕಾಲದಲ್ಲಿ ಸುರಕ್ಷಿತ ಪ್ರದೇಶಕ್ಕೆ ಸಾಗಿಸುವುದು ಯುವಕರಿಗೆ ಒಂದು ಪಂಥಾಹ್ವಾನವೇ!
ಎರಡು ಒನಕೆಗಳ ನಡುವೆ ದಪ್ಪ ಕಂಬಳಿಯನ್ನು ಕಟ್ಟಿ ಅದರ ಮಧ್ಯೆ ಬಾಣಂತಿ/ಮುದುಕರು/ರೋಗಿಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವರು. ಆ ಕತ್ತಲ ರಾತ್ರಿಗಳಲ್ಲಿ ಒಣಗಿಸಿ ಸೋಗೆಯ ಸೂಟೆ (ದೊಂದಿ) ಯೇ ಬೆಳಕಿಗೆ ಆಧಾರ. ಎಷ್ಟೋ ಸಂದರ್ಭಗಳಲ್ಲಿ ನದಿಯಲ್ಲಿ ಹೆಣಗಳ ಸಾಲು ತೇಲಿ ಬರುವುದನ್ನು ಕಂಡವರ ಒಡಲು ಮರಗಟ್ಟುವುದು. ಸಾಕು ಈ ದುರ್ಧರ ಬದುಕು ಎಂದು ಹತಾಶಗೊಳ್ಳುವರು ಜನ. ಆದರೆ ಮಳೆಗಾಲ ಕಳೆದೊಡನೆ ನೆಮ್ಮದಿಯ ಉಸಿರು. ತಮ್ಮ ದೈನಂದಿನ ಚಟುವಟಿಕೆಗಳನ್ನು ಎಗ್ಗಿಲ್ಲದೆ ನಡೆಸಿಕೊಂಡು ಹೋಗುವರು. ಹಾಗಾಗಿ ಪ್ರಾಜ್ಞರು ಈ ಬದುಕನ್ನು ಮಾಯೆ ಎಂದು ಕರೆದರು.
ಮುಂದುವರಿಯುವುದು.......
ಕಾದು ಓದಿ-ತುಳು ತಿಂಗಳು, ಆಟಿಗೆ ಔಷದೀಯ ಆಹಾರಗಳು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ