ಶನಿವಾರ, ಜುಲೈ 13, 2013

ಮಾರಕ ರೋಗಗಳ ತಾಣ ಪಡುಬಿದ್ರಿ ಟೆಂಪೋ ನಿಲ್ದಾಣ.. ಪಡುಬಿದ್ರಿ ಗ್ರಾಮ ಪಂಚಾಯತ್ ಮೌನ..

ವರದಿ-ಸುರೇಶ್ ಎರ್ಮಾಳ್
ಪಡುಬಿದ್ರಿ ಗ್ರಾ.ಪಂ. ನಿರ್ಲಕ್ಷ್ಯಕ್ಕೆ ಒಳಗಾದ ಪಡುಬಿದ್ರಿ ಟೆಂಪೋ ನಿಲ್ದಾಣ ಮಾರಕ ರೋಗಗಳ ತಾಣವಾಗಿ ರೂಪುಗೊಳ್ಳುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳ ಬೇಕಾಗಿದ್ದ ಪಡುಬಿದ್ರಿ ಗ್ರಾ.ಪಂ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತ್ತಾಗಿದೆ ಎಂಬುದಾಗಿ ಟೆಂಪೋ ಚಾಲಕರು ಗ್ರಾ.ಪಂ. ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
13 (4)
ಪಡುಬಿದ್ರಿ ಮುಖ್ಯ ಪೇಟೆಯ ಅತೀ ಸಮೀಪದಲ್ಲೇ ಕಾರ್ಕಳ ರಸ್ತೆಗೆ ತಿರುಗುವ ತಿರುವಲ್ಲೇ ಇರುವ ಈ ಟೆಂಪೋ ನಿಲ್ದಾಣದ ಪರಿಸರ ತ್ಯಾಜ್ಯ ಘಟಕವಾಗಿ ಮಾರ್ಪಟ್ಟಿದ್ದು, ಎಲ್ಲಾ ಕಡೆಗಳ ತ್ಯಾಜ್ಯಗಳು ಈ ಪ್ರದೇಶದಲ್ಲಿ ರಾಶಿ ಬಿದ್ದಿದೆ. ಈ ಘನತ್ಯಾಜ್ಯಗಳ ದೆಸೆಯಿಂದ ಈ ಪ್ರದೇಶದ ನೀರು ಹರಿದು ಹೋಗುವ ಚರಂಡಿಗಳು ಮುಚ್ಚಿ ಹೋಗಿದ್ದು. ಟೆಂಪೋ ನಿಲ್ದಾಣದ ಮುಂಭಾಗ ಕೃತಕ ಕೆಸರ ಕೆರೆ ನಿರ್ಮಾಣಗೊಂಡಿದೆ. ಈ ಕೆರೆಯ ಮೇಲಿಂದ ವಾಹನಗಳು ಚಲಿಸುವ ಸಂದರ್ಭ ಅದರಿಂದ ಎರೆಚಲ್ಪಡುವ ದುರ್ನಾತ ಭರಿತ ನೀರು ಬಸ್ಸು ಕಾಯಲು ನಿಲ್ಲುವ ಪ್ರಯಾಣಿಕರ ಮೇಲೆ, ಶಾಲಾ ಕಾಲೇಜು ವಿದ್ಯಾರ್ಥಿಗಳ ಹಾಗೂ ಪಾರ್ಕ್ ಮಾಡಲ್ಪಟ್ಟ ಟೆಂಪೋಗಳ ಮೇಲೆ ಎರೆಚಲ್ಪಟ್ಟು ನಿತ್ಯ ನರಕ ಅನುಭವಿಸುತ್ತಿದ್ದೇವೆ ಎನ್ನುತ್ತಾರೆ ಟೆಂಪೋ ಚಾಲಕರು.
13 (3)
ಈ ಪ್ರದೇಶದಲ್ಲಿ ಸಂಗ್ರಹವಾಗಿರುವ ವಿವಿಧ ತ್ಯಾಜ್ಯಗಳು ದುರ್ನಾತ ಬೀರುವುದಲ್ಲದೆ, ಅದರಲ್ಲಿ ಜನ್ಮ ಪಡೆದ ಸೊಳ್ಳೆಗಳಿಂದ ಕಚ್ಚಿಸಲ್ಪಟ್ಟ ನಾವು ಅದ್ಯಾವಾಗ ಮಾರಕ ರೋಗಗಳಿಗೆ ತುತ್ತಾಗುತ್ತೇವೆಯೋ ಎಂಬ ಭಯ ನಮ್ಮನ್ನು ಕಾಡುತ್ತಿದೆ ಎನ್ನುತ್ತಾರೆ ಸ್ಥಳೀಯ ಅಂಗಡಿ ಮಾಲೀಕರೋರ್ವರು. ಈ ರಸ್ತೆಯಾಗಿಯೇ ನಿತ್ಯ ಸಂಚರಿಸುವ ಗ್ರಾ.ಪಂ. ಅಧ್ಯಕ್ಷರು ಸಹಿತ ಸದಸ್ಯರು ಈ ಸಮಸ್ಯೆಗಳನ್ನು, ನಾವು ಪಡುತ್ತಿರುವ ಬವಣೆಗಳನ್ನು ಕಣ್ಣಾರೇ ನೋಡುತ್ತಿದ್ದರೂ, ನಾವೇನೂ ಕಂಡೇ ಇಲ್ಲ ಎಂಬಂತ್ತೆ ಸಾಗುತ್ತಿರುವುದು ನಮಗೆ ಬೇಸರ ತಂದಿದೆ. ಈ ಎಲ್ಲಾ ಸಮಸ್ಯೆಗಳು ಕೈ ಮೀರಿ ಹೋಗುವ ಮುನ್ನ ಬಗೆಹರಿಸಿದರೆ ಒಳಿತು ತಪ್ಪಿದ್ದಲ್ಲಿ ನಾವು ನಮ್ಮ ವಾಹನ ಸಹಿತ ಗ್ರಾ,ಪಂ. ಮುಂಭಾಗದಲ್ಲಿ ಪ್ರತಿಭಟನೆ ನಡೆಸ ಬೇಕಾದೀತು ಎಂಬುದಾಗಿ ಎಚ್ಚರಿಸಿದ್ದಾರೆ.
13 (2)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ