ಬುಧವಾರ, ಜುಲೈ 17, 2013

`ಆಟಿ ತಿಂಗಳ ತುಳುನಾಡು' ಆಟಿ ಸ್ಪೆಷಲ್ ಸರಣಿ ಲೇಖನ

ಆಟಿ ತಿಂಗಳ ತುಳುನಾಡು
ಸ್ಪೆಷಲ್ ಸರಣಿ ಲೇಖನ
aaa babu amin
                                                                            ಲೇಖಕರು-ಬನ್ನಂಜೆ ಬಾಬು ಅಮೀನ್
ತುಳು ತಿಂಗಳುಗಳಲ್ಲಿ `ಆಟಿ ಸೋಣ' ಗಳು ನೋವು ನಲಿವಿನ ಸಮ್ಮಿಲನವನ್ನು ನೀಡುವುದು. ಇತೀಚಿಗಿನ ದಿನಗಳಲ್ಲಿ ತುಳುವ ಬಾಂಧವರಿರುವೆಡೆಗಳಲ್ಲಿ `ಆಟಿಡೊಂಜಿದಿನ' ವನ್ನು ಒಂದು ರೀತಿಯ ಹಬ್ಬವಾಗಿ ಆಚರಿಸಿಕೊಂಡು  ಬರುತ್ತಿರುವುದನ್ನು ನಾವು  ಗಮನಿಸುತ್ತೇವೆ. ಆಟಿ ತಿಂಗಳ ಒಂದು ದಿನವನ್ನು ಸಂತೋಷದ ಸಂಭ್ರಮದ ದಿನವನ್ನಾಗಿ ಊರವರೆಲ್ಲ ಕೂಡಿ ಆಚರಿಸುವರು.
1 - Copy
ತುಳುನಾಡಿನೆಲ್ಲೆಡೆ ಶಾಲಾ ಕಾಲೇಜುಗಳಲ್ಲಿ, ಮಹಿಳೆಯರ ವಿವಿಧ ಕೂಟಗಳಲ್ಲಿ. ಪಂಚಾಯತ್ ಕಚೇರಿಗಳಲ್ಲಿ, ಯುವ   ಸಂಘಟನೆಗಳಲ್ಲಿ   ಹೀಗೆ ಹತ್ತು ಹಲವು ಸಂದರ್ಭಗಳಲ್ಲಿ ಈ ಸಂತಸದ ಕೂಟ ನಡೆಯುವುದು. ಈ ದಿನ ಊರಿನ ಎಲ್ಲ ಸ್ಥರದ,  ಸಮಾಜಗಳ ಮಹಿಳೆಯರು ತಮ್ಮ ಮನೆಗಳಲ್ಲಿ ತಮಗೆ ತಿಳಿದಿರುವ ಬಗೆಬಗೆಯ ತಿಂಡಿ, ತಿನಿಸು, ಖಾದ್ಯಗಳನ್ನು ತಯಾರಿಸಿ ತರುವರು. ಆಟಿ ತಿಂಗಳ ಕೂಟಕ್ಕೆ ನಾಲ್ಕು ಜನ ಅತಿಥಿಗಳನ್ನು ಬರಮಾಡಿಕೊಂಡು ಈ ತಿಂಗಳ ವಿಶೇಷಗಳ ಕುರಿತು ಮಾಹಿತಿ ನೀಡುವರು. ಬಳಿಕ ಎಲ್ಲರೊಂದಿಗೆ ಸಹಭೋಜನದ ಸವಿಯನ್ನು ಅನುಭವಿಸುವರು.
10 - Copy
ಒಂದು ದೃಷ್ಟಿಕೋನದಿಂದ ವಿವೇಚಿಸಿದರೆ ಗ್ರಾಮೀಣ ಪ್ರದೇಶ ಅಥವಾ ನಗರಗಳಲ್ಲಿ ಈ ಕೂಟಗಳಲ್ಲಿ ಸಂತಸ ನೀಡುವ ವಿಚಾರವೆಂದರೆ ಆ ಪರಿಸರದ ಎಲ್ಲಾ ವರ್ಗದ ಜನ- ಹಿಂದೂ, ಮುಸ್ಲಿಂ, ಜೈನ, ಕ್ರೈಸ್ತ ಇತ್ಯಾದಿ, ಬಿಚ್ಚುಮನಸ್ಸಿನಿಂದ ಭಾಗವಹಿಸುವುದು. ಮಾತ್ರವಲ್ಲ ಈ ಪರಿಕ್ರಮದಿಂದ ತುಳುವ ಆಚರಣೆಗಳ ಕುರಿತಾಗಿ ಯಾವುದೇ ಪರಿಜ್ಞಾನವಿಲ್ಲದ ಎಳೆಯ ಮನಸ್ಸುಗಳಿಗೆ ಕನಿಷ್ಟ ಆಟಿ ತಿಂಗಳ ಕುರಿತಾದ ತಿಳುವಳಿಕೆ ನೀಡುವ ಒಂದು ಸತ್ಸಂಪ್ರದಾಯಕ್ಕೆ ನಾಂದಿ ಹಾಕಿದಂತಾಗುವುದು. ಈ ದೃಷ್ಟಿಕೋನದಲ್ಲಿ ಇಂತಹಾ ಕಾರ್ಯಕ್ರಮ ಸಂಯೋಜಕರನ್ನು ಶ್ಲಾಘಿಸಬೇಕು.
7 - Copy
ಆದರೆ ಇಂದಿನ ಯುವ ಜನಾಂಗಕ್ಕೆ ಮೇಲೆ ವಿವರಿಸಿದ ಸಾಮಾಜಿಕ ಸಂಘಟನೆಗಳು ಆಟಿ ತಿಂಗಳನ್ನು ಕುರಿತಂತೆ ಪರಿಚಯಿಸುವಂತೆ ಆ ತಿಂಗಳು ಸುಖಕರವಾಗಿತ್ತೇ? ಇಂದಿನ ಆಟಿ ತಿಂಗಳ ಸ್ನೇಹ ಕೂಟಗಳಲ್ಲಿ ಬಗೆಬಗೆಯ ತಿಂಡಿ ಖಾದ್ಯಗಳನ್ನು ಹೊಟ್ಟೆ ತುಂಬ ತಿಂದು ತೇಗುವ ಯೋಗ ಹಿಂದಿನ ಕಾಲದಲ್ಲಿ ತುಳುನಾಡಿನ ಸಾಮಾನ್ಯ ಕುಟುಂಬಕ್ಕೆ ಕನಿಷ್ಟ ಒಂದು ದಿನವಾದರೂ ಒದಗಿ ಬರುತ್ತಿತ್ತೇ? ಉತ್ತರ- ಖಂಡಿತಾ ಇರಲಿಲ್ಲ. ಹಾಗಾಗಿ ಇಂತಹಾ ಜಿಜ್ಞಾಸೆ ಪರಿಹರಿಸಲು ಆಗಿನ ಕಾಲದ ನೈಜ ಚಿತ್ರಣವನ್ನು ಓದುಗರ ಸಮಕ್ಷಮ ಬಿಚ್ಚಿಡುವುದರ ಅವಶ್ಯಕತೆ ಇರುವುದು.
2 - Copy
ಒಂದು ಪ್ರದೇಶದ ಸುತ್ತಲಿನ ಪರಿಸರ ಮತ್ತು ಭೌಗೋಳಿಕ ಸ್ಥಿತಿಗತಿ ಎಲ್ಲಾ ಕಾಲಗಳಲ್ಲಿ ಜನಜೀವನದ  ಮೇಲೆ ಪರಿಣಾಮ ಭೀರುವುದನ್ನು ನಾವು ಒಪ್ಪಿಕೊಳ್ಳಲೇಬೇಕು. ತುಳುನಾಡು ಅದಕ್ಕೆ ಅಪವಾದವೇನಲ್ಲ. ತೆಂಕಣದ ರಾಮೇಶ್ವರಿಂದ, ಬಡಗಣದ ಅಂಕೋಲದವರೆಗೆ, ಪಶ್ಚಿಮದ ಅರಬ್ಬೀ ಸಮುದ್ರ ತಟದಿಂದ ಪೂರ್ವದ ಪಶ್ಚಿಮ ಘಟ್ಟದ ತಪ್ಪಲಿನ ವರೆಗೆ ಒಂದು ಕಾಲದಲ್ಲಿ ಸಾಂಸ್ಕೃತಿಕ ತುಳುನಾಡು ಹಬ್ಬಿಕೊಂಡಿತ್ತು.ಇಲ್ಲಿಯ ಮುಖ್ಯ ಆಹಾರದ ಬೆಳೆ ಭತ್ತ(ಅಕ್ಕಿ). ವರ್ಷದಲ್ಲಿ ಜೂನ್ ತಿಂಗಳಿಂದ ಸೆಪ್ಟಂಬರ್ ವರೆಗೆ ಸುರಿಯುವ ಧಾರಾಕಾರ ಮಳೆಯನ್ನು ಮುಖ್ಯ ಆಹಾರದ ಬೆಳೆ ಬೆಳೆಯಲು ಅವಲಂಭಿಸಬೇಕಾಗಿರುವುದು.
5 - Copy
ತುಳುನಾಡಿನ ಮೂಲನಿವಾಸಿಗಳ ಬದುಕಿನ ಸರಿಯಾದ ವಿವರಣೆ ಲಭ್ಯವಾಗಬೇಕಿದ್ದರೆ ಅರ್ಧ ಶತಮಾನದಷ್ಟು ಹಿಂದೆ ಸರಿದು ನೋಡಬೇಕಾದುದು ಅನಿವಾರ್ಯ ಕೂಡಾ. ಆ ಕಾಲದಲ್ಲಿ ತುಳುಭೂಮಿಯಲ್ಲಿ ಇಂದಿನಂತೆ ಐಷಾರಾಮದ ಬದುಕಿನ ಪೂರಕ ಅವಶ್ಯಕತೆಗಳಾದ ಸುಸಜ್ಜಿತ ಗೃಹಗತಿ, ಆಧುನಿಕ ಸಾರಿಗೆ ವ್ಯವಸ್ಥೆ, ತಂತ್ರಜ್ಞಾನ, ವಿದ್ಯೆ, ಉದ್ಯೋಗ, ಆರ್ಥಿಕ ಅನುಕೂಲತೆ, ವೈದ್ಯಕೀಯ ಸವಲತ್ತು ಯಾವುದೂ ಇರಲಿಲ್ಲ. ಈ ಲೇಖನ ಸರಣಿಯಲ್ಲಿ ಆಟಿ ಮತ್ತು ಸೋಣ ತಿಂಗಳಲ್ಲಿ ತುಳುವರ ಬದುಕಿನ ಸುತ್ತಮುತ್ತ ನಡೆಯುವ ಆಚರಣೆ ಇತ್ಯಾದಿಗಳನ್ನು ವಿವರಿಸುವ ಪ್ರಯತ್ನ ಮಾಡಲಾಗಿದೆ.
9 - Copy
ಮುಂದುವರಿಯುವುದು........
-----------
ಕಾದು‌ಓದಿ-ತುಳುವರ ಬದುಕು ಮತ್ತು ಆಟಿಯಲ್ಲಿ ಮಳೆ ನೆರೆಯ ಹೊರೆ
-------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ