ಗುರುವಾರ, ಜುಲೈ 25, 2013

ಕುಂದಾಪುರ: ತೀವ್ರಗೊಂಡಿದೆ ಕಡಲ್ಕೊರೆತ- ತೀರಪ್ರದೇಶದ ನಿವಾಸಿಗಳು ಕಂಗಾಲು

ಕುಂದಾಪುರ: ಕಳೆದ ಎರಡು ದಿನಗಳಿಂದ ಸಮುದ್ರದ ದೈತ್ಯ ಅಲೆಗಳ ರಭಸಕ್ಕೆ ತಾಲೂಕಿನ ಮರವಂತೆ, ವಿನಾಯಕ ಕೋಡಿ, ಹಳವಳ್ಳಿ, ಶಿರೂರು, ಕಳಿಹಿತ್ಲು, ದೊಂಬೆ,ಮಣೂರು ಪಡುಕೆರೆ ಮೊದಲಾದೆಡೆ ಕಡಲ್ಕೊರೆತ ತೀವ್ರಗೊಂಡಿದ್ದು ಸಮುದ್ರ ತೀರ ನಿವಾಸಿಗಳು ನಲುಗುವಂತಾಗಿದೆ. ಕೋಟ ಗ್ರಾಮಪಂಚಾಯತ್ ವ್ಯಾಪ್ತಿಗೆ ಒಳಪಡುವ ಮಣೂರು-ಪಡುಕೆರೆ ಪ್ರದೇಶದಲ್ಲಿ ಕಡಲ್ಕೊರೆತ ಉಲ್ಭಣಿಸಿದ್ದು ಜನರು ಆತಂಕದಿಂದ ದಿನದೂಡುತ್ತಿದ್ದಾರೆ. ಸ್ಥಳೀಯ ಸಂಪರ್ಕ ರಸ್ತೆ ಕೊಚ್ಚಿ ಹೋಗಿದ್ದು ೨೫-೩೦ ಕ್ಕೂ ಅಧಿಕ ಮನೆಗಳು ಸಂಪರ್ಕ ಮಾರ್ಗ ಕಡಿತಗೊಂಡಿದೆ. ವಿದ್ಯುತ್ ಕಂಬಗಳು ಗಾಳಿಗೆ ಧರೆಗುರುಳಿದ್ದು ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ. ಮಣುರಿನ ಜೆಟ್ಟಿಗೇಶ್ವರ ದೇವಸ್ಥಾನದ ಸಮೀಪದ ಸಮುದ್ರ ತೀರಪ್ರದೇಶದಲ್ಲಿ ಘಟನೆ ಸಂಭವಿಸಿದೆ. ಮಂಗಳವಾರ ಸಾಧಾರಣ ಸ್ಥಿತಿಯಲ್ಲಿದ್ದ ಕಡಲ್ಕೊರೆತ ನಿನ್ನೆ ಬಿಗುಡಾಯಿಸಿದ್ದು ಇನ್ನು ಜಾಸ್ಥಿಯಾಗಬಹುದೆಂಬ ಅನುಮಾನವನ್ನು ತೀರವಾಸಿಗಳು ವ್ಯಕ್ತಪಡಿಸಿದ್ದಾರೆ.
padukere (2)
ಕೊಚ್ಚಿ ಹೋದ ರಸ್ತೆ: ಮಣೂರು ಪಡುಕೆರೆಯಲ್ಲಿ ಕಳೆದೆರಡು ದಿನಗಳಿಂದ ಕಡಲು ಪ್ರಕ್ಷುಬ್ಧಗೊಂಡಿದ್ದು ತಡೆಗೋಡೆ ಕಲ್ಲನ್ನು ಹಾಸಿರದ ಪ್ರದೇಶದಲ್ಲಿ ನೀರಿನ ಸೆಳೆತಕ್ಕೆ ಸಿಕ್ಕು ಸಂಪರ್ಕ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದೆ. ೫೦ ಮೀಟರ್ ವ್ಯಾಪ್ತಿಯಲ್ಲಿ ರಸ್ತೆ ಕೊಚ್ಚಿ ಹೋಗಿ ೨೫ ಮನೆಗಳ ಸಂಪರ್ಕ ಮಾರ್ಗ ಇಲ್ಲವಾಗಿದೆ. ದೈತ್ಯ ಅಲೆಗಳ ರಭಸಕ್ಕೆ ಭಾಗಶ: ರಸ್ತೆ ಕೊಚ್ಚಿ ಹೋದ ಪರಿಣಾಮ ತೀರ ನಿವಾಸಿಗಳು ಅತಂತ್ರರಾಗಿದ್ದು ಸ್ಥಳೀಯ ನಿವಾಸಿ ಜಲಜ ಮರಕಾಲ್ತಿಯವರ ಮನೆ ಕಡಲು ಪಾಲಾಗುವ ಭೀತಿ ಎದುರಾಗಿದೆ.
padukere (1)
ಸ್ಥಳೀಯ ನಿವಾಸಿ  ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಜಲಜಾರ ಮನೆ ಸಮುದ್ರ ಪಾಲಾಗುವ ಲಕ್ಷಗಳು ಕಂಡುಬರುತ್ತಿದೆ.ಅಲ್ಲದೇ ಹತ್ತಾರು ಮರಗಳು ಧರೆಗುರುಳುವ ಪರಿಸ್ಥಿತಿ ಇದ್ದು ಮನೆ ಹಾಗೂ ಮರಗಳನ್ನು ನಂಬಿ ಜೀವನ ಸಾಗಿಸುತ್ತಿದ್ದ ಇವರು ದಿಕ್ಕು ತೋಚದಂತಾಗಿದ್ದಾರೆ.
ಜನಪ್ರತಿನಿಧಿಗಳು ಭೇಟಿ: ಜಿಲ್ಲಾ ಪಂಚಾಯತ್ ಸದಸ್ಯೆ ಸುನಿತಾ ರಾಜರಾಂ, ತಾಲೂಕು ಪಂಚಾಯತ್ ಸದಸ್ಯರಾದ ರಾಘವೇಂದ್ರ ಕಾಂಚನ್, ಭರತ್ ಕುಮಾರ್ ಶೆಟ್ಟಿ, ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಕಾರನಿರ್ವಾಹಕ ಇಂಜಿನೀಯರ್ ಟಿ.ಎಸ್. ರಾಥೋಡ್, ಸಹಾಯಕ ಇಂಜಿನೀಯರ್ ಡಯಾಸ್, ಸ್ಥಳಿಯ ಗ್ರಾಮಪಂಚಾಯತ್ ಅಧ್ಯಕ್ಷರು, ಗ್ರಾಮಲೆಕ್ಕಿಗ, ಪಂಚಾಯತ್ ಅಭಿವ್ರದ್ಧಿ ಅಧಿಕಾರಿಗಳು, ಗ್ರಾ.ಪಂ. ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Picture 071
ಕೋಡಿಯಲ್ಲಿ ಕಡಲ್ಕೊರೆತ: ಪ್ರದೇಶಕ್ಕೆ ತಹಶಿಲ್ದಾರ್ ಭೇಟಿ
ಕಳೆದ ನಾಲ್ಕೈದು ದಿನಗಳಿಂದ ಕುಂದಾಪುರ ತಾಲೂಕಿನ ಕೋಡಿ ಹಾಗೂ ಹಳವಳ್ಳಿ ಪ್ರದೇಶದಲ್ಲಿ ಕಡಲ್ಕೊರೆತ  ತೀವ್ರಗೊಂಡಿದ್ದು ಸ್ಥಳೀಯರು ಭಯಭೀತರಾಗಿದ್ದಾರೆ. ಸಮುದ್ರದ ನೀರು ರಸ್ತೆಯವರೆಗೂ ಬರುತ್ತಿದ್ದು ರಸ್ತೆ ಸಮೀಪದಲ್ಲಿರುವ ಮನೆಗಳು, ಅಂಗಡಿಗಳು ನೀರು ಪಾಲಾಗುವ ಸಾಧ್ಯತೆ ಇದೆ. ಅಲ್ಲದ್ಸೇ ಕೋಡಿ-ಬೀಜಾಡಿ(ಹಳವಳ್ಳಿ) ಸಂಪರ್ಕ ರಸ್ತೆ ಕೊಚ್ಚಿ ಹೋಗುವ ಭೀತಿ ಎದುರಾಗಿದೆ.
padukere
ಹಳವಳ್ಳಿ ಹಾಗೂ ಕೋಡಿ ಪ್ರದೇಶದಲ್ಲಿರುವ ಕಿನಾರ ಹೊಟೇಲ್ ಗೆ ಸಂಬಂಧಿಸಿದ ಕ್ಯಾಬಿನ್ ಗಳು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗುವ ಭೀತಿ ಎದುರಾಗಿದೆ. ನೀರಿನ ತಡೆಗೆ ಹಾಕಿದ ತಡೆಗೋಡೆಯ ಕಲ್ಲುಗಳು ನೀರಿನ ಪಾಲಾಗುತ್ತಿದ್ದು ಮರ-ಮಟ್ಟುಗಳು ಇದರೊಂದಿಗೆ ಕಡಲಿನಾಳಕ್ಕೆ ಇಳಿಯುತ್ತಿದೆ.
Picture 065
ಕೋಡಿಯ ಎಮ್.ಕೋಡಿ, ಮಧ್ಯ ಕೋಡಿ ಹಾಗೂ ಕೋಡಿ ತಲೆ ಪ್ರದೇಶದಲ್ಲಿ ಕಡಲ್ಕೊರೆತ ನಾಲ್ಕೈದು ದಿನಗಳಿಂದ ಬಿಗುಡಾಯಿಸಿದ್ದು ಸಮುದ್ರ ತೀರ ನಿವಾಸಿಗಳು ಕಂಗಾಲಾಗಿದ್ದಾರೆ. ಚುನಾವಣೆ ವೇಳೆಯಲ್ಲಿ ಆಗಮಿಸುವ ಜನಪ್ರತಿನಿಧಿಗಳು ಈಗ ನಮ್ಮ ಸಂಕಷ್ಟಕ್ಕೆ ಸ್ಪಂಧಿಸುತ್ತಿಲ್ಲ ಎಂಬ ಗಂಭೀರ ಆರೋಪವನ್ನು ಸ್ಥಳೀಯರು ಮಾಡುತ್ತಿದ್ದಾರೆ.
ಕೋಡಿ ಕಡಲ್ಕೊರೆತ ಪ್ರದೇಶಕ್ಕೆ ಕುಂದಾಪುರ ತಹಶಿಲ್ದಾರ್ ಗಾಯತ್ರಿ ನಾಯಕ್, ಕಂದಾಯ ಅಧಿಕಾರಿಗಳು, ಬಂದರು ಇಲಾಖೆಯ ಇಂಜಿನಿಯರ್, ತಾಲೂಕು ಪಂಚಾಯತ್ ಸದಸ್ಯ ಮಂಜು ಬಿಲ್ಲವ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ