ಗುರುವಾರ, ಜುಲೈ 25, 2013

ಭಂಡಾರ್ಕಾರ್‍ಸ್ ಕಾಲೇಜಿನ ‘ಮುತ್ತು ಬಂದಿದೆ ಕೇರಿಗೆ’ ಶಿಬಿರ

ಕುಂದಾಪುರ:  ಕನಕದಾಸರು ಕೇವಲ ಸಂತ, ದಾರ್ಶನಿಕ ಮಾತ್ರವಲ್ಲ. ಈಗಿನ ಕಾಲಕ್ಕೂ ಪ್ರಸ್ತುತರಾದವರು. ಅವರ ಚಿಂತನೆಗಳು ಎಂದಿಗೂ ಶ್ರೇಷ್ಠವೆನಿಸಿಕೊಳ್ಳುತ್ತದೆ  ಎಂದು ಸಂಶೋಧಕ ಡಾ.ಎ.ವಿ.ನಾವಡ  ಅಭಿಪ್ರಾಯಪಟ್ಟರು. ಅವರು ಇಲ್ಲಿನ ಭಂಡಾರ್ಕಾರ್‍ಸ್ ಕಾಲೇಜಿನ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆ ಮತ್ತು ಕನಕದಾಸ ಅಧ್ಯಯನ ಕೇಂದ್ರ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ‘ಮುತ್ತು ಬಂದಿದೆ ಕೇರಿಗೆ’ ರಸಗ್ರಹಣ ಶಿಬಿರದಲ್ಲಿ ಕನಕರ ಜೀವನ, ಕೃತಿ ದರ್ಶನ ಕುರಿತು ವಿಶೇಷ ಉಪನ್ಯಾಸ ನೀಡಿದರು.
CSK_1889
ಸಮಾಜವನ್ನು ತಿದ್ದುವ ಮತ್ತು ಸಂಸ್ಕರಿಸುವ ಕೆಲಸವನ್ನು  ಕನಕದಾಸರು ಆಗಲೇ ಮಾಡಿದ್ದಾರೆ.ತಮ್ಮ ಕೀರ್ತನೆಗಳಲ್ಲಿ  ಸಮಾಜದಲ್ಲಿನ ಅಸಮಾನತೆಯನ್ನು ಚುಚ್ಚುವುದರ ಮೂಲಕ ಸಾಮರಸ್ಯವನ್ನು  ಕುರಿತು ಹೇಳಿದ್ದಾರೆ. ಸಾಂಸ್ಕೃತಿಕ ಚಿತ್ರಣವನ್ನು, ಸಾಹಿತ್ಯವನ್ನು, ಚರಿತ್ರೆ ಕಟ್ಟುವ ಆಕರಗಳನ್ನು , ಕಾವ್ಯ, ಪಾಡ್ದನಗಳನ್ನು ರಾಮದಾಸ ಚರಿತೆಯಲ್ಲಿ ಕಾಣಬಹುದು, ಹಾಗಾಗಿ ಮಧ್ಯಕಾಲೀನ ಕಾಲಕ್ಕೆ ಮಾತ್ರ ಸೀಮಿತವಾಗದೆ ಈಗಿನ ಕಾಲಕ್ಕೂ ಪ್ರಸ್ತುತವಾಗಿದ್ದಾರೆ. ಅವರ ಜೀವನದ ಕಥೆಗಳನ್ನು ನೋಡಿಕೊಂಡು ಬದುಕಿನ ಐತಿಹ್ಯಗಳನ್ನು ಸಂಶೋಧಿಸಬೇಕು. ಭಕ್ತಿಯ ಸಾಹಿತ್ಯ, ಕೀರ್ತನೆಗಳಲ್ಲಿ ಆಧ್ಯಾತ್ಮಕ ಚಿಂತನೆಗಳಿದ್ದರೂ ಸಮುದಾಯದಲ್ಲಿ ಮೇಲುಕೀಳು ಎಂಬ ಭೇದ ಮಾಡದೇ ಎಲ್ಲರಲ್ಲಿ ಶ್ರೇಷ್ಠರೆನಿಸಿಕೊಂಡವರು ಕನಕದಾಸರು ಎಂದು ಹೇಳಿದರು.
ಕಾಲವನ್ನು ತನ್ನ ನುಡಿಯಿಂದ ಮತ್ತು ಬರವಣಿಗೆಯಿಂದ ಎಚ್ಚರಿಸುವ ಕೆಲಸವನ್ನು ಸೀದಾಸರಳ ಭಾಷೆಯನ್ನು ಉಪಯೋಗಿಸಿ ಅಚ್ಚುಕಟ್ಟಾಗಿ ಮಾಡಿದವರು ಕನಕದಾಸರು. ಅವರ ಸಾಹಿತ್ಯ, ಕೀರ್ತನೆಗಳನ್ನು, ದಾಸ ಸಾಹಿತ್ಯವನ್ನು ಪ್ರಸರಿಸುವ ಪ್ರಚಾರ ಮಾಡುವ ಕೆಲಸ ಇಂದು ಆಗಬೇಕಾಗಿದೆ ಎಂದು ಹೇಳಿದರು. ಕಾರ್ಯಕರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್. ಶಾಂತಾರಾಮ್ ಮಾತನಾಡಿ ಸಾಮಾಜಿಕ ಕಳಕಳಿ ಬರಬೇಕಾದರೆ ವ್ಯಕ್ತಿಯ ವ್ಯಕ್ತಿತ್ವ ಮುಖ್ಯವಾಗುತ್ತದೆ. ಜಾತಿ ವೈಷಮ್ಯ, ಮೇಲುಕೀಳು ಇಂತಹ ಸಾಮಾಜಿಕ ಸ್ಥಿತಿಯಿಂದಾಗಿ ಸಾಮಾಜಿಕ ಕಳಕಳಿ ಹುಟ್ಟಿಕೊಳ್ಳುತ್ತದೆ.
ಕೃತಿ, ಕಥೆ ಮತ್ತು ಕೀರ್ತನೆಗಳ ಹಿಂದೆ ಇರುವ ತತ್ವಗಳನ್ನು ಸಾಮಾನ್ಯರಿಗೆ ತಿಳಿಸಲು ಕಥೆಕಟ್ಟಿ ಸಂಶೋಧನೆಗಳ ಮೂಲಕ ತಿಳಿಸುವ ಪ್ರಯತ್ನ ಮಾಡಿದ ಕನಕದಾಸರ ಧ್ಯೇಯವನ್ನು ಬೆಳೆಸುವ ಪ್ರಯತ್ನ ಆಗಬೇಕಾಗಿದೆ. ಎಂದು ಅಭಿಪ್ರಾಯಪಟ್ಟರು. ವೇದಿಕೆಯಲ್ಲಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿಯ ಕೃಷ್ಣ ಭಟ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ  ಗಾಯಕಿ ಸಂಗೀತಾ ಬಾಲಚಂದ್ರ  ಅವರ ನೇತೃತ್ವದಲ್ಲಿ ಗಾಯನ ಶಿಬಿರವು ನಡೆಯಿತು
ಪದವಿ ಕಾಲೇಜಿನ ಪ್ರಾಂಶುಪಾಲರಾದ  ಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿದರು. ಕನ್ನಡ ಪ್ರಾಧ್ಯಾಪಕಿ ಪ್ರೊ.ರೇಖಾ ಬನ್ನಾಡಿ ವಂದಿಸಿದರು.  ಕನ್ನಡ ಉಪನ್ಯಾಸಕ ರಂಜಿತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ