ಮಂಗಳವಾರ, ನವೆಂಬರ್ 5, 2013

ಶ್ರೀಕೃಷ್ಣ ಮಠದಲ್ಲಿ ನರಕ ಚತುರ್ದಶಿ.., ಪರಸ್ಪರ ಎಣ್ಣೆ ಸ್ನಾನ ಮಾಡಿಸಿದ ಸ್ವಾಮೀಜಿಗಳು

ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ನಾಡಿನಾದ್ಯಂತ ಜೋರಾಗಿದೆ. ಈ ನಡುವೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಾಂಪ್ರದಾಯಿಕ ನರಕ ಚತುರ್ದಶಿ ಆಚರಿಸಲಾಯಿತು. ಮೂರು ಮಂದಿ ಸ್ವಾಮೀಜಿಗಳು ಚಂದ್ರಶಾಲೆಯಲ್ಲಿ ಎಣ್ಣೆ ಸ್ನಾನ ಮಾಡಿ ಭಕ್ತರಿಗೆ ಎಣ್ಣೆ ಪ್ರಸಾದ ವಿತರಿಸಿದರು. ಮಠದ ಭಕ್ತರು ಸ್ವಾಮೀಜಿಗಳಿಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸಿ ಖುಷಿಪಟ್ಟರು.
ಎಲ್ಲಾ ಕಡೆ ದೀಪಗಳ ಹಬ್ಬ ದೀಪಾವಳಿಯ ಸಂಭ್ರಮ. ದೇವಾಲಯಗಳ ನಗರಿ ಉಡುಪಿಯಲ್ಲೂ ಹಬ್ಬದ ಆಚರಣೆ ಜೋರಾಗಿದೆ. ಉಡುಪಿ ಶ್ರೀಕೃಷ್ಣ ಮಠದಲ್ಲಿ ನರಕ ಚತುರ್ದಶಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಗರ್ಭಗುಡಿಯ ಮುಂಭಾಗದ ಚಂದ್ರಶಾಲೆಯಲ್ಲಿ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠಾಧಿಪತಿಗಳು ಮತ್ತು ಪರ್ಯಾಯ ಸೋದೆ ವಿಶ್ವವಲ್ಲಭ ಸ್ವಾಮೀಜಿ ಪರಸ್ಪರ ಎಣ್ಣೆ ಪ್ರಸಾದ ವಿನಿಮಯ ಮಾಡಿಕೊಂಡರು.
ಸಾವಿರಾರು ಭಕ್ತರಿಗೆ ಎಣ್ಣೆ ಪ್ರಸಾದ ನೀಡಿ ನರಕ ಚತುರ್ದಶಿಯ ಶುಭಾಷಯ ಕೋರಿದರು. ನರಕಾಸುರ ವಧೆಯಾದ ನಂತರ ಲೋಕಕ್ಕೆ ಶುಭವಾಯ್ತು. ದೀಪಾವಳಿ ಅಜ್ಞಾನವನ್ನು ದೂರ ಮಾಡಲಿ ಎಂದರು.
ಭೋಜನ ಶಾಲೆಯಲ್ಲಿ ಪೇಜಾವರ ಸ್ವಾಮೀಜಿ ಮತ್ತು ಸೋದೆಶ್ರೀಗಳಿಗೆ ಮಠದ ಭಕ್ತರು ಮತ್ತು ಸ್ವಾಮೀಜಿಗಳ ಶಿಷ್ಯವೃಂದ ಎಣ್ಣೆ ಲೇಪಿಸಿದರು. ವರ್ಷಕ್ಕೊಮ್ಮೆ ನಡೆಯುವ ಸ್ನಾನದ ಹಬ್ಬದಂದು ಸ್ವಾಮೀಜಿಗಳಿಗೆ ಶಿಷ್ಯವೃಂದ ಎಣ್ಣೆಹಚ್ಚಿ ಸ್ನಾನ ಮಾಡಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ.
ಒಂದು ಲೆಕ್ಕದಲ್ಲಿ ಎಣ್ಣೆಯಲ್ಲೇ ಸ್ನಾನ ಎಂದರೂ ತಪ್ಪಿಲ್ಲ ಬಿಡಿ. ನರಕ ಚತುರ್ದಶಿಯಂದು ಸ್ವಾಮೀಜಿ ಕೈಯಿಂದ ಎಣ್ಣೆ ಪ್ರಸಾದ ಸ್ವೀಕರಿಸಲು ಭಕ್ತರು ಮುಗಿಬಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ